Prejudices of Philosophers - ತತ್ತ್ವಜ್ಞಾನಿಗಳ ಪೂರ್ವಗ್ರಹಗಳು

1

ಸತ್ಯದ ಇಚ್ಚೆ, ಇದು ಅನೇಕ ಅಪಾಯಕಾರಿ ಸಂಶೋಧನೆಗಳಿಗೆ  ನಮ್ಮನ್ನು ಪ್ರಚೋದಿಸಿದೆ, ಎಲ್ಲಾ ತತ್ವಜ್ಞಾನಿಗಳು ಇಲ್ಲಿಯವರೆಗೆ ಗೌರವದಿಂದ ಮಾತನಾಡಿರುವ ಪ್ರಸಿದ್ಧ 'ಸತ್ಯ', ಈ ಸತ್ಯಶೋಧನೆಯ ಕಡೆಗಿನ ಇಚ್ಛೆ ನಮ್ಮ ಮುಂದೆ ಎಷ್ಟೆಲ್ಲಾ ಪ್ರಶ್ನೆಗಳನ್ನು ಹರಡಿದೆ! ಎಂತಹ ವಿಚಿತ್ರ, ಗೊಂದಲಮಯ, ಪ್ರಶ್ನಾರ್ಹ ಪ್ರಶ್ನೆಗಳು! ಇದು ಬಹಳ ವರ್ಷಗಳ ಕಥೆಯಾಗಿದೆಯಾದರೂ; ಇನ್ನೂ ಈಗಷ್ಟೇ ಪ್ರಾರಂಭವಾದಂತೆ ತೋರುತ್ತದೆ. ಕೊನೆಗೆ ನಾವು ಅಪನಂಬಿಕೆ ಬೆಳೆಸಿಕೊಂಡು, ತಾಳ್ಮೆ ಕಳೆದುಕೊಂಡು, ಅಸಹನೆಯಿಂದ ದೂರ ಸರಿದರೆ ಆಶ್ಚರ್ಯವಿದೆಯೇ? ಈ ಸ್ಫಿಂಕ್ಸ್ ನಮಗೆ ನಮ್ಮನ್ನು ನಾವೇ ಪ್ರಶ್ನೆಗಳನ್ನು ಕೇಳಲು ಕಲಿಸುತ್ತದೆಯೇ? ಇಲ್ಲಿ ನಿಜವಾಗಿಯೂ ನಮಗೆ ಪ್ರಶ್ನೆಗಳನ್ನು ಕೇಳುವವರು ಯಾರು? ನಮ್ಮಲ್ಲಿರುವ ಈ  "ಸತ್ಯದ ಇಚ್ಛೆ" ಎಂಬುದರ ನಿಜವಾದ ಅರ್ಥವೇನು? ವಾಸ್ತವವಾಗಿ ನಾವು ಈ ಇಚ್ಛೆಯ ಮೂಲದ ಬಗೆಗಿನ ಪ್ರಶ್ನೆಗೆ ದೀರ್ಘ ವಿಶ್ರಾಂತಿ ನೀಡಿದ್ದೇವೆ - ಇನ್ನೂ ಹೆಚ್ಚಿನ ಒಂದು ಮೂಲಭೂತ ಪ್ರಶ್ನೆಯ ಮುಂದೆ ಸಂಪೂರ್ಣ ಸ್ಥಗಿತಗೊಳ್ಳುವ ಸಲುವಾಗಿ. ನಾವೀಗ "ಸತ್ಯದ ಇಚ್ಛೆ"ಯ ಮೌಲ್ಯದ ಬಗ್ಗೆಯೇ ಪರಿಶೀಲಿಸುತ್ತಿದ್ದೇವೆ. ನಮಗೆ ಸತ್ಯ ಬೇಕು ಎಂದು ನಿಜವೇ ಆದಲ್ಲಿ: ಅಸತ್ಯ ಏಕೆ ಬೇಡ? ಮತ್ತು ಅನಿಶ್ಚಿತತೆ? ಮತ್ತು ನಿರ್ಲಕ್ಷ್ಯವೂ ಸಹ? ಸತ್ಯದ ಮೌಲ್ಯದ ಬಗೆಗಿನ ಸಮಸ್ಯೆ ನಮ್ಮ ಮುಂದಿದೆಯೇ - ಅಥವಾ ಸಮಸ್ಯೆಯ ಮುಂದೆ ನಮ್ಮನ್ನು ನಾವೇ ಪ್ರಸ್ತುತಪಡಿಸಿಕೊಂಡಿದ್ದೇವೆಯೇ? ನಮ್ಮಲ್ಲಿ ಈಡಿಪಸ್ (Oedipus) ಯಾರು? ಸ್ಪಿನ್ಕ್ಸ್ (Sphinks) ಯಾರು?. ಇದು ಪ್ರಶ್ನೆಗಳ ಮತ್ತು ವಿಚಾರಣಾ ಟಿಪ್ಪಣಿಗಳ ಸಂಕೀರ್ಣದಂತೆ ತೋರುತ್ತದೆ. 

ಮತ್ತು ಕೊನೆಗೂ ಈ ಸಮಸ್ಯೆಯನ್ನು ಈ ಹಿಂದೆಂದೂ ಪ್ರಸ್ತಾಪಿಸಿಲ್ಲ ಎಂಬಂತೆ, ನಾವೇ ಅದನ್ನು ಮೊದಲು ಗ್ರಹಿಸಿ, ಅದನ್ನು ನೋಡಿದವರು ಮತ್ತು ಅದನ್ನು ಗುರುತಿಸಿದ ಮೊದಲಿಗರು ಎಂಬಂತೆ ನಮಗೆ ಬಾಸವಾಗುತ್ತಿರುವುದನ್ನು ನಂಬಬಹುದೇ? ಏಕೆಂದರೆ ಈ ಸಮಸ್ಯೆಯನ್ನು  ಪ್ರಸ್ತಾಪಿಸುವಲ್ಲಿ ಅಪಾಯವಿದೆ, ಬಹುಶಃ ಇದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ.

2

ಯಾವುದೇ ಒಂದು ವಿಚಾರ ಅದರ ವಿರುದ್ಧವಾದುದರಿಂದ ಹುಟ್ಟಲು ಹೇಗೆ ಸಾಧ್ಯ? 
ಉದಾಹರಣೆಗೆ,
ದೋಷದಿಂದ ಸತ್ಯ?
ಅಥವಾ ವಂಚನೆಯ ಇಚ್ಛೆಯಿಂದ ಸತ್ಯದ ಇಚ್ಛೆ?
ಅಥವಾ ಸ್ವಾರ್ಥದಿಂದ ಧಾರಾಳ ಕಾರ್ಯ?
ಅಥವಾ ದುರಾಸೆಯಿಂದ ಜ್ಞಾನಿಯ ಸೂರ್ಯನಂತೆ ಪ್ರಕಾಶಿಸುವ ಬೆಳಕಿನ ದೃಷ್ಟಿ?
ಅಂತಹ ಹುಟ್ಟು ಅಸಾಧ್ಯ; ಅದರ ಕನಸು ಕಾಣುವವನು ಮೂರ್ಖ ಅಷ್ಟೇ ಅಲ್ಲ, ಶತಮೂರ್ಖ; ಅತ್ಯುನ್ನತ ಮೌಲ್ಯದ ವಿಚಾರಗಳು ವಿಭಿನ್ನ ಹಾಗೂ ತಮ್ಮದೇ ಆದ ಸ್ವತಂತ್ರ ಮೂಲವನ್ನು ಹೊಂದಿರಬೇಕು.  

ಈ ಕ್ಷಣಿಕ, ಪ್ರಲೋಭಕ, ನಗಣ್ಯ ಮಾಯಾಲೋಕದಲ್ಲಿ, ಬ್ರಾಂತಿ ಮತ್ತು ಹಪಾಪಿತನದ ವಿಶ್ವದಲ್ಲಿ, ತಮ್ಮ ಮೂಲವನ್ನು ಹೊಂದಿರಲು ಸಾಧ್ಯವೇ ಇಲ್ಲ.
ಆದರೆ ಸ್ಥಿತಿಯ ಮಡಿಲಲ್ಲಿ, ಅನಂತದಲ್ಲಿ, ರಹಸ್ಯವಾದ ದೈವದಲ್ಲಿ, ಸ್ವಯಂ ವಸ್ತುವಿನಲ್ಲಿ—ಅಲ್ಲಿ ಮಾತ್ರ ಅದರ ಮೂಲವಿರಲು ಸಾಧ್ಯ.

ಈ ರೀತಿಯ ವಿವರಣೆ, ಶತಮಾನಗಳುದ್ದಕ್ಕೂ ತತ್ವಜ್ಞಾನಿಗಳಲ್ಲಿನ ಪೂರ್ವಾನುಗ್ರಹಗಳನ್ನು ಹೊರಗೆಳೆಯುತ್ತದೆ. ಈ ರೀತಿಯ ಮೌಲ್ಯೀಕರಣ ಅವರ ತಾರ್ಕಿಕ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಅಡಗಿರುತ್ತದೆ.
ಅವರ ಈ ನಂಬಿಕೆಯ ಮೂಲಕ, ತಮ್ಮ ಜ್ಞಾನ ಸಂಪಾದನೆಯಲ್ಲಿ ತೊಡಗುತ್ತಾರೆ, ಏಕೆಂದರೆ ಅದೇ ಅವರ ಪಾಲಿನ ಅಂತಿಮ ಸತ್ಯ.
ತತ್ವಜ್ಞಾನಿಗಳ ಮೂಲ ನಂಬಿಕೆಯೇ “ಮೌಲ್ಯಗಳ ವಿರುದ್ಧ ಕಲ್ಪನೆಗಳಲ್ಲಿ ನಂಬಿಕೆಯಿರಿಸುವುದು.”
ಎಚ್ಚರಿಕೆಯಿಂದಿದ್ದ ತತ್ವಜ್ಞಾನಿಗಳಿಗೂ ಸಹ ಈ ವಿಚಾರದ ಮೇಲೆ ಶುರುವಿನಲ್ಲೇ ಅನುಮಾನಿಸಲು (ಇಲ್ಲಿ ಅನುಮಾನವು ಅತ್ಯವಶ್ಯಕವಾಗಿತ್ತು) ಸಾಧ್ಯವಾಗಿಲ್ಲ. ಅವರು ಎಲ್ಲವನ್ನೂ ಸಂಶಯಿಸಬೇಕು (ಅನುಮಾನಿಸಬೇಕು) ಎಂಬ ಪ್ರತಿಜ್ಞೆಯನ್ನು ಮಾಡಿದ್ದರು.
ಅವರು ಅನುಮಾನಿಸಬೇಕಾಗಿದ್ದ ಪ್ರಮುಖ ವಿಚಾರಗಳೆಂದರೆ ಮೊದಲಿಗೆ ವಿರುದ್ಧ ಕಲ್ಪನೆಗಳ ಅಸ್ತಿತ್ವದಲ್ಲಿ, ಎರಡನೆಯದಾಗಿ ಮೌಲ್ಯಗಳ ಹಾಗೂ ತತ್ವಜ್ಞಾನಿಗಳು ಭದ್ರಪಡಿಸಿದ್ದ, ಮೇಲ್ನೋಟದ ಅಂದಾಜುಗಳಾಗಿರದೆ ತಾತ್ಕಾಲಿಕ ದೃಷ್ಟಿಕೋನಗಳಾಗಿದ್ದ ಮೌಲ್ಯಗಳ ವಿರುದ್ಧ ಕಲ್ಪನೆಗಳಲ್ಲಿ.
ಬಹುಶಃ ಯಾವುದೋ ಮೂಲೆಯಿಂದ, ನೆಲಮಟ್ಟದಿಂದ ಕಪ್ಪೆಯ ದೃಷ್ಟಿಗೆ ಕಾಣಸಿಗುವ ದೃಷ್ಟಿಕೋನ, ವರ್ಣ ಚಿತ್ರಕಾರರಿಂದ ಪ್ರಚಲಿತ ಅಭಿವ್ಯಕ್ತಿ ಎರವಲು ಪಡೆದಂತೆ.
ಸಕಾರಾತ್ಮಕ, ನಿಸ್ವಾರ್ಥ ಒಳಗೊಂಡಂತೆ ಸತ್ಯ ಹೊಂದಿರಬಹುದಾದ ಎಲ್ಲಾ ಮೌಲ್ಯಗಳನ್ನು ಹೊರತುಪಡಿಸಿ, ಸ್ವಾಭಾವಿಕವಾಗಿ ಜೀವನದ ಇನ್ನೂ ಹೆಚ್ಚಿನ ಮೂಲಭೂತ ಮತ್ತು ಮೇಲುಸ್ತರದ ಮೌಲ್ಯಗಳನ್ನು ಕಪಟತೆ, ಭ್ರಮೆಯ ಇಚ್ಛೆ, ಸ್ವಾರ್ಥ ಮತ್ತು ದುರಾಸೆಗೆ ನಿಯೋಜಿಸಬಹುದಾದ ಸಾಧ್ಯತೆಯಿದೆ.
ಆ ಒಳ್ಳೆಯ ಮತ್ತು ಗೌರವಾನ್ವಿತ ವಸ್ತುಗಳ ಮೌಲ್ಯವು ನಿಖರವಾಗಿ ಈ ದುಷ್ಟ ಮತ್ತು ಸ್ಪಷ್ಟವಾಗಿ ವಿರುದ್ಧವಾದ ವಿಷಯಗಳಿಗೆ ಕಪಟವಾಗಿ ಸಂಬಂಧಿಸಿರುವುದು, ಗಂಟು ಹಾಕುವುದು ಮತ್ತು ಹೆಣೆಯಲ್ಪಟ್ಟಿರುವುದು—ಬಹುಶಃ ಅವುಗಳೊಂದಿಗೆ ಮೂಲಭೂತವಾಗಿ ಒಂದೇ ಆಗಿರುವುದು ಸಹ ಸಾಧ್ಯವಿದೆ.
ಬಹುಶಃ! ಆದರೆ ಅಂತಹ ಅಪಾಯಕಾರಿ "ಬಹುಶಃ" ಗಳೊಂದಿಗೆ ಯಾರು ತಮ್ಮನ್ನು ತಾವು ಗುರುತಿಸಿಕೊಳ್ಳಲು ಬಯಸುತ್ತಾರೆ!
ಅವುಗಳ ತನಿಖೆಗಾಗಿ ತತ್ವಜ್ಞಾನಿಗಳ ಹೊಸ ಕ್ರಮದ ಆಗಮನಕ್ಕಾಗಿ ಕಾಯಬೇಕು, ಅವರು ಬೇರೆಯದೇ ಅಭಿರುಚಿಗಳು ಮತ್ತು ಒಲವುಗಳನ್ನು ಹೊಂದಿರುತ್ತಾರೆ, ಅಪಾಯಕಾರಿ "ಬಹುಶಃ" ಎಂಬ ಪದವು—ಪ್ರತಿಯೊಂದು ಅರ್ಥದಲ್ಲಿ ಇದುವರೆಗೆ ಪ್ರಚಲಿತದಲ್ಲಿರುವ ತತ್ವಜ್ಞಾನಿಗಳ ವಿರುದ್ಧ, ಮತ್ತು ಎಲ್ಲಾ ಗಂಭೀರವಾಗಿ ಹೇಳುವುದಾದರೆ, ಅಂತಹ ಹೊಸ ತತ್ವಜ್ಞಾನಿಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತಿರುವುದು ನಾನು ನೋಡುತ್ತಿದ್ದೇನೆ.

3

ತತ್ವಶಾಸ್ತ್ರಜ್ಞರನ್ನು ಬಹಳ ಹತ್ತಿರದಿಂದ ಗಮನಿಸಿ ಅವರ ಸಾಲುಗಳನ್ನು ಬಹಳ ಆಳವಾಗಿ ಅರ್ಥ ಮಾಡಿಕೊಂಡ ನಂತರ ನನಗೆ ಅನಿಸಿಕೆ - ನಮ್ಮ ಬಹುಪಾಲಿನ ಪ್ರಜ್ಞಾಪೂರ್ವಕ ಚಿಂತನೆಯು ನಮ್ಮ ಸಹಜ ಪ್ರವೃತ್ತಿಗಳ ಫಲವಾಗಿದೆ. ಇದು ತತ್ವಶಾಸ್ತ್ರದ ಆಲೋಚನೆಗಳಿಗೂ ಅನ್ವಯಿಸುತ್ತದೆ. ಅನುವಂಶಿಕತೆ ಹಾಗೂ ಜನ್ಮಜಾತ ಗುಣಗಳನ್ನು ನಾವು ಹುಟ್ಟಿದಾಗ ಹೊಸದಾಗಿ ಕಲಿತಂತೆ, ಇಲ್ಲಿ ಪ್ರತಿಯೊಬ್ಬರೂ ಹೊಸದಾಗಿ ಕಲಿಯಬೇಕಿದೆ. ಜನನ ಎನ್ನುವುದು ಅನುವಂಶಿಕತೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಹೇಗೆ ಒಂದು ಸಣ್ಣ ಪಾತ್ರ ವಹಿಸುತ್ತದೆಯೋ, ಹಾಗೆಯೇ ನಮ್ಮ ಜಾಗೃತ ಆಲೋಚನೆಗಳೂ ಸಹ ನಮ್ಮ ಸಹಜ ಪ್ರವೃತ್ತಿಗಳಿಗೆ ವಿರುದ್ದವಾಗಿರುವುದಿಲ್ಲ. ಒಬ್ಬ ತತ್ವಶಾಸ್ತ್ರಜ್ಞನ ಬಹುಪಾಲು ಪ್ರಜ್ಞಾಪೂರ್ವಕ ಚಿಂತನೆಗಳು ಆತನ ಸಹಜ ಪ್ರವೃತ್ತಿಗಳ ರಹಸ್ಯ ಪ್ರಭಾವದಲ್ಲಿರುತ್ತವೆ ಮತ್ತು ನಿರ್ದಿಷ್ಟ ದಿಕ್ಕಿನಲ್ಲಿ ಸಾಗುತ್ತಿರುತ್ತವೆ. ಮತ್ತು ಎಲ್ಲಾ ತರ್ಕ ಹಾಗೂ ಅದರ ಶಕ್ತಿಯ ಹಿಂದೆ ಕೆಲವು ಮೌಲ್ಯಗಳಿರುತ್ತವೆ. ಇನ್ನೂ ಸರಳವಾಗಿ ಹೇಳುವುದಾದರೆ ದೈಹಿಕ ಅಗತ್ಯಗಳು, ನಿರ್ದಿಷ್ಟ ಜೀವನಶೈಲಿಯನ್ನು ಉಳಿಸಿಕೊಳ್ಳಲಿಕ್ಕಾಗಿ ಇರುತ್ತವೆ. ಉದಾಹರಣೆಗೆ ಅನಿರ್ದಿಷ್ಟವಾದದಕ್ಕಿಂತ ಖಚಿತವಾದದ್ದು ಶ್ರೇಷ್ಠ ಮತ್ತು ಮಿಥ್ಯೆಗಿಂತ ಸತ್ಯವು ಶ್ರೇಷ್ಠ ಎಂದು ನಾವು ನಂಬುತ್ತೇವೆ. ಈ ಮೌಲ್ಯಗಳ ಮೇಲಿನ ನಂಬಿಕೆಗಳು ನಾವು ಬದುಕಲು ಸಹಾಯ ಮಾಡುತ್ತವೆ. ಅವು ಬಹಳ ಟೊಳ್ಳಾಗಿಯೂ ಇರಬಹುದು ಅಥವಾ ನಾವು ಬದುಕಲು ಅಗತ್ಯವಾಗಿ ಬೇಕಾದ ಸರಳ ಸುಳ್ಳುಗಳಾಗಿರಬಹುದು. ಬಹುಶಃ ಎಲ್ಲದರ ಮೌಲ್ಯ ನಿರ್ಧರಿಸುವುದು ಮಾನವ ಅಲ್ಲವೆನಿಸುತ್ತದೆ.

4

ಒಂದು ಕಲ್ಪನೆ ತಪ್ಪಾದ ಮಾತ್ರಕ್ಕೆ ನಾವು ಅದರ ಬಗ್ಗೆ ಆಕ್ಷೇಪಿಸಲಾಗದು: ಇಲ್ಲಿನ, ಬಹುಶಃ, ಈ ಹೊಸ ರೀತಿಯ ಭಾಷೆ ಅತ್ಯಂತ ವಿಚಿತ್ರ ಎನ್ನಿಸಬಹುದು. ಇಲ್ಲಿನ ಪ್ರಮುಖ ಪ್ರಶ್ನೆಯೆಂದರೆ, ಒಂದು ಕಲ್ಪನೆಯು ಎಷ್ಟರ ಮಟ್ಟಿಗೆ ಜೀವನವನ್ನು ಜೀವಿಸಲು, ಸಂರಕ್ಷಿಸಲು, ಪ್ರಭೇದಗಳನ್ನು ಸಂರಕ್ಷಿಸಲು, ಬಹುಶಃ ಪ್ರಭೇದಗಳನ್ನು ಪೋಷಿಸಲು ಸಹಾಯ ಮಾಡುತ್ತದೆ ಎಂಬುದಾಗಿದೆ. ಮೂಲಭೂತವಾಗಿ ನಾವು ತಪ್ಪು ಕಲ್ಪನೆಗಳನ್ನು ಸಹ ನಮಗೆ ಬಹಳ ಅತ್ಯಗತ್ಯವೆಂದು ಭಾವಿಸುತ್ತೇವೆ. ಉದಾಹರಣೆಗೆ, ಕರಾರುವಕ್ಕಾದ ಸತ್ಯಗಳಂತಹ ಕಟ್ಟುಕಥೆಗಳಿಲ್ಲದೇ, ಬದಲಾವಣೆಯೇ ಆಗದ ಕಲ್ಪನೆಯ ಜಗತ್ತಿನೊಡನೆ ವಾಸ್ತವ ಜಗತ್ತಿನ ಹೋಲಿಕೆಯಿಲ್ಲದೇ ಮತ್ತು ನಿರಂತರವಾಗಿ ಸಂಖ್ಯೆಗಳನ್ನು ಉಪಯೋಗಿಸಿ ನಕಲಿ ಪ್ರಪಂಚವನ್ನು ಸೃಷ್ಟಿಸಿಕೊಳ್ಳದೇ ಮನುಷ್ಯನಿಗೆ ಬದುಕಲು ಸಾಧ್ಯವಿಲ್ಲ - ತಪ್ಪು ಕಲ್ಪನೆಗಳನ್ನು ತ್ಯಜಿಸುವುದು ಜೀವನವನ್ನೇ ತ್ಯಜಿಸಿದಂತಾಗುತ್ತದೆ, ಬದುಕಿನ ನಿರಾಕರಣೆಯಾಗುತ್ತದೆ. ಬದುಕಿಗೆ ತಪ್ಪು ಕಲ್ಪನೆಗಳೇ ಅತ್ಯವಶ್ಯಕ; ಇದು ಖಂಡಿತವಾಗಿಯೂ ಅಪಾಯಕರ ರೀತಿಯಲ್ಲಿ ಹಳೆಯ ಸಾಂಪ್ರದಾಯಿಕ ಆಲೋಚನೆಗಳನ್ನು ಪ್ರಶ್ನಿಸುವಂತೆ ಮಾಡುತ್ತದೆ ಮತ್ತು ಹಾಗೆ ಮಾಡಲು ಧೈರ್ಯವಿರುವ ತತ್ವಶಾಸ್ತ್ರವು ಅದೇ ಕಾರಣದಿಂದಾಗಿ ತನ್ನನ್ನು ಒಳಿತು ಕೆಡುಕುಗಳಾಚೆಗೆ ಇರಿಸಿಕೊಳ್ಳುತ್ತದೆ.

Comments

Popular posts from this blog

APOPHTHEGMS AND INTERLUDES - ಜ್ನಾನೋಕ್ತಿಗಳು ಮತ್ತು ಮದ್ಯಂತರ ಬರಹಗಳು